ಕ್ಯಾಲಿಫೋರ್ನಿಯಾದಲ್ಲಿ ಬಿ-52 ಬಾಂಬರ್ ಪತನ, 8 ಮಂದಿ ಸಾವು
ಕ್ಯಾಲಿಫೋರ್ನಿಯಾ: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಅಮೆರಿಕ ವಾಯುಪಡೆಯ ಪ್ರಮುಖ ಕೇಂದ್ರವಾಗಿರುವ ಎಡ್ವರ್ಡ್ಸ್ ವಾಯುನೆಲೆಯಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿ-52 ಸ್ಟ್ರಾಟೋಫೋರ್ಟ್ರೆಸ್ ಬಾಂಬರ್ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಬೆಳಗ್ಗೆ ಸುಮಾರು 11:20ರ ವೇಳೆಗೆ ಈ ದುರಂತ ಸಂಭವಿಸಿದೆ. ದಿನನಿತ್ಯದ ಪರೀಕ್ಷಾ ಕಾರ್ಯಾಚರಣೆಯ ಭಾಗವಾಗಿ ಹಾರಾಟ ನಡೆಸುತ್ತಿದ್ದ ವಿಮಾನವು ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಬೆನ್ನಲ್ಲೇ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ. ದುರಂತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ಘಟನೆ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದೆ.
ಘಟನೆಯ ನಂತರ ಎಡ್ವರ್ಡ್ಸ್ ವಾಯುನೆಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಅಲ್ಲದೆ ಒಳಬರುವ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದ್ದು, ರಕ್ಷಣಾ ಹಾಗೂ ತನಿಖಾ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ.
A U.S. Air Force B-52 bomber reportedly crashed shortly after takeoff from Edwards Air Force Base, triggering a major emergency response. Thick black smoke was seen rising from the crash site as rescue and firefighting crews rushed to the scene. (Representative Video) pic.twitter.com/DmwPzFz8QM
— Defence Journal (@Defence_Journl) June 16, 2026
ಬೋಯಿಂಗ್ ನಿರ್ಮಿತ ಬಿ-52 ಸ್ಟ್ರಾಟೋಫೋರ್ಟ್ರೆಸ್ ವಿಶ್ವದ ಅತ್ಯಂತ ಶಕ್ತಿಶಾಲಿ ದೀರ್ಘ ಶ್ರೇಣಿಯ ಬಾಂಬರ್ ವಿಮಾನಗಳಲ್ಲಿ ಒಂದಾಗಿದ್ದು, 1955ರಿಂದ ಅಮೆರಿಕ ವಾಯುಪಡೆಯ ಸೇವೆಯಲ್ಲಿದೆ. ಸಾಂಪ್ರದಾಯಿಕ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ವಿಮಾನ ಅಮೆರಿಕದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಇನ್ನು ಎಡ್ವರ್ಡ್ಸ್ ವಾಯುನೆಲೆ ಅಮೆರಿಕದ ವಿಮಾನಗಳ ಪರೀಕ್ಷೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಮುಖ ಕೇಂದ್ರವಾಗಿದ್ದು, ಈ ದುರಂತ ವಾಯುಪಡೆಯ ವಲಯದಲ್ಲಿ ಆತಂಕ ಮೂಡಿಸಿದೆ.